ಭವ್ಯರೇ ಮುನಿಗಳ ಚಾತುರ್ಮಾಸ ಬರುತ್ತಿದೆ ಬನ್ನಿರಿ ಭಕ್ತಿ ಮಾಡೋಣ.
ಭವ್ಯರೇ ಮಳೆಗಾಲ ಬಂತೆಂದರೆ ಜೈನರಿಗೆ ಎಲ್ಲಿಲ್ಲದ ಸಡಗರ. ಧಾರ್ಮಿಕ ಅಭಿರುಚಿ ಇದ್ದವರಿಗೆ ತ್ಯಾಗಿಗಳ ಚಾತುರ್ಮಾಸ ಹಬ್ಬವೇ ಸರಿ. ಸಾಲು ಸಾಲು ಪ್ರವಚನಗಳು, ಆರಾಧನೆಗಳು, ವಿಧಾನಗಳು, ಪೂಜೆಗಳು ತ್ಯಾಗಿಗಳ ಸಮ್ಮುಖದಲ್ಲಿ ನಡೆಯಲಿದ್ದು ಭಕ್ತ ಜನರು ಅದರಲ್ಲಿ ಪಾಲ್ಗೊಳ್ಳುವ ಸದಾವಕಾಶ ದೊರಕುತ್ತದೆ. ಇದು ಒಂದು ರೀತಿಯಲ್ಲಿ ಆಧುನಿಕತೆಯ ಭರಾಟೆಯಲ್ಲಿ ಬದುಕುವ ನಮಗೆ ಕೊಂಚ ಸಮಾಧಾನವನ್ನು ನೀಡುತ್ತದೆ. ಪ್ರವಚನಗಳಿಂದ ಜೈನ ಧರ್ಮದ ಒಳತಿರುಳು, ಭವ್ಯತೆ, ಗೂಢ ವಿಷಯಗಳು, ಹಿರಿಮೆಗರಿಮೆ, ವೈಭವಗಳ ಪರಿಚಯವಾಗುತ್ತದೆ. ಆಸ್ವಾದನೆ ಮಾಡುವವರಿಗೊಂದು ಸುವರ್ಣಾವಕಾಶ.
ಯಾವುದನ್ನು ಮಾಡಬೇಕು
ಇಷ್ಟೇ ಅಲ್ಲದೇ ತ್ಯಾಗಿಗಳಿಗೆ ಆಹಾರ ದಾನ ಮಾಡುವ ಸುಯೋಗವೂ ಲಭಿಸುತ್ತದೆ. ದಾನಗಳಲ್ಲೇ ಸರ್ವೋತ್ಕೃಷ್ಟವಾದ ದಾನ ಆಹಾರ ದಾನವಾಗಿರುತ್ತದೆ. ನವಧಾ ಭಕ್ತಿಯಿಂದ ಆಹಾರ ದಾನ ಮಾಡುವುದು ಜೈನ ಪರಂಪರೆಯಲ್ಲಿ ಅನಾದಿಕಾಲದಿಂದ ನಡೆದುಕೊಂಡು ಬಂದ ಮಹತ್ತತೆಯಾಗಿದೆ. ಮುನಿಗಳ ಉಪಕರಣ ಅಂದರೆ ಪಿಂಛಿ, ಕಮಂಡಲ, ಶಾಸ್ತ್ರಗಳನ್ನು ಕೂಡ ದಾನ ಮಾಡುವ ಅವಕಾಶ ಇದೆ. ಮುನಿಗಳ ಆರೋಗ್ಯಕ್ಕೆ ಪೂರಕವಾಗುವ ಅವರ ವ್ರತಾಚರಣೆಗಳಿಗೆ ಸಮ್ಮತವಾಗುವಂತಹ ಔಷಧವನ್ನು ದಾನ ಮಾಡಬಹುದು. ಒಟ್ಟಿನಲ್ಲಿ ತ್ಯಾಗಿಗಳ ಸೇವೆ ನಮಗೆ ಸೌಭಾಗ್ಯವಾಗಿರುತ್ತದೆ. ಆದರೆ ಈ ಸೌಭಾಗ್ಯದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಪಾಲ್ಗೊಳ್ಳುವಂತೆ ನಾವು ಮಾಡಬೇಕಿದೆ. ಅಂದರೆ ನಮ್ಮ ಮನೆಯ ಮಕ್ಕಳನ್ನು ಕೂಡ ಈ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಮಕ್ಕಳು ನಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲೇಬೇಕು ಎಂಬ ಆಶಯ ನಮ್ಮದಾಗಲಿ.
ಯಾವುದನ್ನು ಮಾಡಬಾರದು
ತ್ಯಾಗಿಗಳ ಬಳಿ ಯಾವುದೇ ಸಮಸ್ಯೆಗಳನ್ನು ತರದೇ ಇರುವುದು ಒಳ್ಳೆಯದು. ಮುನಿಗಳು ಮೋಕ್ಷ ಪಥದ ಅನ್ವೇಷಣೆಯಲ್ಲಿ ಇರುವವರು. ಅವರ ಸಾಧನಾ ಪಥಕ್ಕೆ ನಾವುಗಳು ಅನುಮೋದನೆಯನ್ನು ನೀಡಬೇಕು. ಮುನಿಗಳನ್ನು ಪರಿಗ್ರಹಿಗಳನ್ನಾಗಿ ನಾವು ಮಾಡಬಾರದು. ಕೆಲವರು ಮುನಿಗಳಿಗೆ ಅವರ ಉಪಕರಣಗಳ ಹೊರತು ಯಾವುದೇ ವಸ್ತುಗಳನ್ನು ನೀಡಿದರೂ ಅದು ಮುನಿಗಳಿಗೆ ಪರಿಗ್ರಹವಾಗುತ್ತದೆ. ಎಂದಿಗೂ ಮುನಿಗಳ ಭವ್ಯ ಪರಂಪರೆಗೆ ನಾವುಗಳು ಚ್ಯುತಿ ತಾರದೇ ಇರುವುದು ನಾವು ಮುನಿಗಳಿಗೆ ಮಾಡುವ ನಿಜವಾದ ಸೇವೆ ಆಗಿರುತ್ತದೆ.
ಮುನಿಗಳಿಗೆ ಜಯಕಾರ ಹೇಳೋಣ
ಭವ್ಯ ಮುನಿಗಳನ್ನು ಭಕ್ತಿಯಿಂದ ಸ್ವಾಗತಿಸೋಣ. ಅವರಿಗೆ ಜಯಕಾರ ಹೇಳೋಣ. ಸಾಧ್ಯವಿರುವ ಸೇವೆಯನ್ನು ಮಾಡೋಣ. ಈ ಕಲಿಯುಗದಲ್ಲೂ ಸಕಲ ಪರಿಗ್ರಹಗಳನ್ನು ತೊರೆದು ಜಿನಧರ್ಮದ ಪ್ರಭಾವನೆಯನ್ನು ಮಾಡುತ್ತಿರುವ ಈ ದಿಗಂಬರ ಸಂತರನ್ನು ಸೇವೆಯಿಂದ ಸಂಪ್ರೀತಿಗೊಳಿಸೋಣ. ನಮೋಸ್ತು , ನಮೋಸ್ತು, ನಮೋಸ್ತು ಎನ್ನೋಣ.
ನಿರಂಜನ್ ಜೈನ್ ಕುದ್ಯಾಡಿ
Comments
Post a Comment